ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರವು ಕರ್ನಾಟಕ ರಾಜ್ಯದ ಜಿಲ್ಲೆ ಆಧಾರಿತ ಮಳೆಯ ಮುನ್ಸೂಚನೆಯನ್ನು ಮತ್ತು ಮುಂದಿನ 5 ದಿನಗಳ ಎಚ್ಚರಿಕೆಗಳನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 11ರಿಂದ 12ರವರೆಗೂ ಮಳೆ ಮುಂದುವರಿಯಲಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಪ್ರಮಾಣ ಮತ್ತು ಎಚ್ಚರಿಕೆಗಳನ್ನು ಒಳಗೊಂಡಿದೆ.

ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದ್ದು, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಹ ಗಮನಾರ್ಹ ಮಳೆಯ ಮುನ್ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಹಗುರದಿಂದ ಮಧ್ಯಮ ಮಳೆ: ದಕ್ಷಿಣ ಒಳನಾಡು ಕರ್ನಾಟಕದ ಬಳ್ಳಾರಿ, ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಸನ್ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಮೋಡಗವಲು ಆಕಾಶ ಮತ್ತು ಹಗುರದಿಂದ ಮಧ್ಯಮ ಮಳೆಯ ನಿರೀಕ್ಷೆ ಇದೆ.

ಕರಾವಳಿ ಕರ್ನಾಟಕದಲ್ಲಿ ಮಧ್ಯಮ ಮಳೆ: ಕರಾವಳಿ ಪ್ರದೇಶದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಮಳೆಯ ಪ್ರಮಾಣವು ಕಡಿಮೆಯಾಗಲಿದೆ.
ಉತ್ತರ ಒಳನಾಡು ಕರ್ನಾಟಕದಲ್ಲಿ ಹಗುರ ಮಳೆ: ಉತ್ತರ ಒಳನಾಡು ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಮಳೆಯ ಪ್ರಮಾಣವು ಕಡಿಮೆಯಾಗಿ ಉಳಿಯುವ ಸಾಧ್ಯತೆ ಇದೆ.
IMDನ ಪ್ರಕಾರ, ಅತ್ಯಂತ ಭಾರಿ ಮಳೆ (204.5 ಮಿಮೀ) ಮತ್ತು ಭಾರಿ ಮಳೆ (115.6-204.5 ಮಿಮೀ) ಸಾಧ್ಯತೆ ಇರುವ ಜಿಲ್ಲೆಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಚ್ಚರಿಸಿದೆ. ಗಂಟೆಗೆ 30-60 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮಿಂಚು-ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಇನ್ನು, ಕೊಡಗು ಮತ್ತು ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ಲ್ಯಾಂಡ್‌ಸ್ಲೈಡ್ ಎಚ್ಚರಿಕೆ ಕೂಡ ನೀಡಲಾಗಿದ್ದು, ಪ್ರಯಾಣಿಕರು ತಮ್ಮ ಸಂಚಾರದ ವೇಳೆ ರಸ್ತೆ ಮತ್ತು ರೈಲು ಮಾರ್ಗಗಳ ಮೇಲೆ ನಿಗಾ ಇರಿಸಬೇಕಿದೆ. ಅಲ್ಲದೇ ರೆಡ್ ಅಲರ್ಟ್ ಜಿಲ್ಲೆಗಳಲ್ಲಿ ಅನಗತ್ಯ ಪ್ರಯಾಣ ತಪ್ಪಿಸುವಂತೆ ಸೂಚಿಸಲಾಗಿದೆ.