ಅಪಾಯಕಾರಿ ಹೃದಯ ಬಡಿತವನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸುವುದರಿಂದ ಹೃದ್ರೋಗ, ಪಾರ್ಶ್ವವಾಯು ಅಥವಾ ಇತರ ಹೃದಯ ಸಮಸ್ಯೆಗಳು ಎದುರಾಗುತ್ತವೆ.
ಹೃದಯದ ಬಡಿತವು ಮನುಷ್ಯನ ಆರೋಗ್ಯವನ್ನು ತಿಳಿಸುತ್ತದೆ. ವೈದ್ಯರ ಬಳಿ ಹೋದಾಗ ವೈದ್ಯರು ಸ್ಟೆತಸ್ಕೋಪ್‌ನಿಂದ ಮೊದಲು ಹೃದಯದ ಬಡಿತವನ್ನು ಪರೀಕ್ಷಿಸುತ್ತಾರೆ. ಹಾರ್ಟ್ ಬೀಟ್ ಹೃದಯ ಬಡಿತದ ಅಳತೆಯಾಗಿದೆ. ಹೃದಯ ಬಡಿತ ಅಥವಾ ಹೃದಯ ಬಡಿತದ ದರವು, ನಮ್ಮ ಹೃದಯವು ನಿಮಿಷಕ್ಕೆ ಎಷ್ಟು ಬಾರಿ ಬಡಿಯುತ್ತದೆ ಎಂಬುದನ್ನು ಸೂಚಿಸುತ್ತದೆ.
ಇದು ನಮ್ಮ ಹೃದಯದ ಆರೋಗ್ಯದ ನಿಯತಾಂಕ ಮಾತ್ರವಲ್ಲ, ನಮ್ಮ ದೇಹದ ಫಿಟ್ನೆಸ್ ಮತ್ತು ಒತ್ತಡದ ಮಟ್ಟವನ್ನು ಕೂಡ ಸೂಚಿಸುತ್ತದೆ. ಸಾಮಾನ್ಯ ಹೃದಯ ಬಡಿತ ನಿಮಿಷಕ್ಕೆ 60 ರಿಂದ 100 ಬಾರಿ ಬಡಿಯುತ್ತದೆ. ಒಂದು ವೇಳೆ ನಿಮ್ಮ ಹೃದಯದ ಬಡಿತವು ನಿಮಿಷಕ್ಕೆ 100 ಕ್ಕಿಂತ ಹೆಚ್ಚು ಅಥವಾ 60 ಕ್ಕಿಂತ ಕಡಿಮೆ ಇದ್ದರೆ ಅದು ಅಪಾಯದ ಸೂಚನೆಯಾಗಿರಬಹುದು.
ಸಾಮಾನ್ಯ ಹೃದಯ ಬಡಿತ ಎಂದರೆ ನಿಮ್ಮ ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡುತ್ತಿದೆ ಎಂದರ್ಥ, ಆದರೆ ಅಪಾಯಕಾರಿ ಹೃದಯ ಬಡಿತವು ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು. ವಿಶ್ರಾಂತಿಯಲ್ಲಿರುವ ಹೃದಯ ಬಡಿತವನ್ನು ವಿಶ್ರಾಂತಿ ಹೃದಯ ಬಡಿತ ಎಂದು ಕರೆಯಲಾಗುತ್ತದೆ. ಸಕ್ರಿಯ ಸ್ಥಿತಿಯಲ್ಲಿರುವ ಹೃದಯ ಬಡಿತವನ್ನು ಸಕ್ರಿಯ ಹೃದಯ ಬಡಿತ ಎಂದು ಕರೆಯಲಾಗುತ್ತದೆ, ಎರಡೂ ವಿಭಿನ್ನ ಸಾಮಾನ್ಯ ಮತ್ತು ಅಪಾಯದ ವ್ಯಾಪ್ತಿಯನ್ನು ಹೊಂದಿವೆ. ಹೃದಯ ಬಡಿತವು ವಯಸ್ಸು, ಆರೋಗ್ಯ ಸ್ಥಿತಿ, ವ್ಯಾಯಾಮ, ಔಷಧಿಗಳು ಮತ್ತು ಒತ್ತಡದಂತಹ ಹಲವು ಅಂಶಗಳಿಂದ ಪ್ರಭಾವಿತವಾಗಿರುತ್ತದೆ.
ಆರೋಗ್ಯಕರ ಹೃದಯಕ್ಕೆ ಸಾಮಾನ್ಯ ಹೃದಯ ಬಡಿತದ ವ್ಯಾಪ್ತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ, ಆದರೆ ಅಪಾಯಕಾರಿ ಹೃದಯ ಬಡಿತವನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸುವುದರಿಂದ ಹೃದ್ರೋಗ, ಪಾರ್ಶ್ವವಾಯು ಅಥವಾ ಇತರ ಹೃದಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಯಾವುದೇ ಅಸಹಜತೆ ಕಂಡುಬಂದರೆ ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗುತ್ತದೆ.
ಅಸಹಜ ಹೃದಯ ಬಡಿತವೆಂದರೇನು?
ಅಸಹಜ ಹೃದಯ ಬಡಿತವು ಅಪಾಯಕಾರಿ ಹೃದಯ ಬಡಿತದ ವರ್ಗಕ್ಕೆ ಸೇರುತ್ತದೆ. ಈ ಸಮಸ್ಯೆಯು ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಅಸಹಜ ಹೃದಯ ಬಡಿತದಲ್ಲಿ ಎರಡು ವಿಧವಿದೆ. ಒಂದು ಅತಿ ವೇಗದ ಬಡಿತ (ಟಾಕಿಕಾರ್ಡಿಯಾ). ಮತ್ತೊಂದು ನಿಧಾನಗತಿಯ ಬಡಿತ ಅಥವಾ ಅನಿಯಮಿತ ಬಡಿತ (ಬ್ರಾಡಿಕಾರ್ಡಿಯಾ).ಪ್ರತಿ ನಿಮಿಷಕ್ಕೆ 100ಕ್ಕೂ ಹೆಚ್ಚು ಬಡಿತಗಳಿದ್ದರೆ ಅದನ್ನು ಟಾಕಿಕಾರ್ಡಿಯಾ ಎನ್ನಲಾಗುತ್ತದೆ. ಗಂಟೆಗೆ 60ಕ್ಕಿಂತ ಕಡಿಮೆ ಬಡಿತಗಳಿದ್ದರೆ ಬ್ರಾಡಿಕಾರ್ಡಿಯಾ ಎನ್ನಲಾಗುತ್ತದೆ. ಈ ಎರಡೂ ಪರಿಸ್ಥಿತಿಯಲ್ಲಿ ಹೃದಯವು ಸಾಕಷ್ಟು ರಕ್ತವನ್ನು ಪಂಪ್ ಮಾಡಲು ಕಷ್ಟಪಡುತ್ತದೆ. ಅಕಾಲಿಕ ಹೃದಯ ಬಡಿತಗಳು ಕೆಲವೊಮ್ಮೆ ಹಾನಿಕಾರಕ ಎನಿಸದೇ ಇದ್ದರೂ ಹೃದಯ ಸೇರಿದಂತೆ ಇತರೆ ಅಂಗಾಂಗಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವನ್ನುಂಟು ಮಾಡುತ್ತದೆ.
ಹೃದಯಕ್ಕೆ ಸಾಕಷ್ಟು ಆಮ್ಲಜನಕಯುಕ್ತ ರಕ್ತ ಪೂರೈಕೆಯಾಗದ ಸ್ಥಿತಿಯನ್ನು ಆಂಜಿನಾ ಎಂದು ಕರೆಯಲಾಗುತ್ತದೆ. ಇದರಿಂದ ಎದೆನೋವು ಅಥವಾ ಅಸ್ವಸ್ಥತತೆ ಉಂಟಾಗುತ್ತದೆ. ಹೃದಯ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದು ರೋಗ ಅಲ್ಲದೇ ಇರಬಹುದು. ಆದರೆ, ಅಪಧಮನಿಯಲ್ಲಿ ಮುಂದೆ ಉಂಟಾಗುವ ತೊಂದರೆಗಳ ಸೂಚನೆಯೂ ಆಗಿರಬಹುದು. ನಿಯಮಿತವಾಗಿ ಇಂತಹ ಸಮಸ್ಯೆ ಉಂಟಾಗುತ್ತಿದ್ದೆ ಹೃದಯದ ಸ್ನಾಯುಗಳಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆ ಹೆಚ್ಚು.
Post a Comment