ನಾವು ನಮ್ಮ ಸಶಸ್ತ್ರ ಪಡೆಗಳಿಗೆ ಮುಕ್ತ ಹಸ್ತ ನೀಡಿದ್ದೇವೆ. ನಮ್ಮ ದೇಶ ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ನಡುವೆ ವ್ಯತ್ಯಾಸವನ್ನು ನೋಡುವುದಿಲ್ಲ. ಭವಿಷ್ಯದಲ್ಲಿ ಪಾಕಿಸ್ತಾನದಿಂದ ಯಾವುದೇ ದುಷ್ಕೃತ್ಯ ಎದುರಾದರೂ ಅದಕ್ಕೆ ಶಿಕ್ಷೆಯನ್ನು ನಮ್ಮ ಸಶಸ್ತ್ರ ಪಡೆಗಳೇ ನಿರ್ಧರಿಸುತ್ತವೆ.
ನವದೆಹಲಿ: ಭಾರತದ ಸಶಸ್ತ್ರ ಪಡೆಗಳು ಉಗ್ರರಿಗೆ ಅವರ ಕಲ್ಪನೆಗೂ ಮೀರಿ ಶಿಕ್ಷಿಸಿದ್ದು, ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನ "ನಿದ್ರೆ ಕಳೆದುಕೊಂಡಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.
79ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ ನಂತರ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು, ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಇಡೀ ರಾಷ್ಟ್ರವು ಆಕ್ರೋಶಗೊಂಡಿದ್ದು, ಆಪರೇಷನ್ ಸಿಂದೂರ್ "ಆ ಆಕ್ರೋಶದ ಪ್ರತಿಕ್ರಿಯೆಯಾಗಿತ್ತು ಎಂದು ಹೇಳಿದರು.
ನಾವು ನಮ್ಮ ಸಶಸ್ತ್ರ ಪಡೆಗಳಿಗೆ ಮುಕ್ತ ಹಸ್ತ ನೀಡಿದ್ದೇವೆ. ಇದೀಗ ನಮ್ಮ ದೇಶ ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ನಡುವೆ ವ್ಯತ್ಯಾಸವನ್ನು ನೋಡುವುದಿಲ್ಲ. ಭವಿಷ್ಯದಲ್ಲಿ ಪಾಕಿಸ್ತಾನದಿಂದ ಯಾವುದೇ ದುಷ್ಕೃತ್ಯ ಎದುರಾದರೂ ಅದಕ್ಕೆ ಶಿಕ್ಷೆಯನ್ನು ನಮ್ಮ ಸಶಸ್ತ್ರ ಪಡೆಗಳೇ ನಿರ್ಧರಿಸುತ್ತವೆ ಎಂದು ತಿಳಿಸಿದರು.
ಭಾರತದ ಮೇಲೆ ಪರಮಾಣು ಬೆದರಿಕೆಗಳು ಬಹಳ ಸಮಯದಿಂದ ಮುಂದುವರೆದಿವೆ. ಆದರೆ, ಅದನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ. ನಮ್ಮ ಶತ್ರುಗಳು ಪರಮಾಣು ಬೆದರಿಕೆ ಮುಂದುವರೆಸಿದರೆ, ನಾವು ಸೂಕ್ತ ಉತ್ತರವನ್ನು ನೀಡಲು ಸಿದ್ಧರಿದ್ದೇವೆ. ನಮ್ಮ ಸಶಸ್ತ್ರ ಪಡೆಗಳು ಪ್ರತಿಕ್ರಿಯೆ ನೀಡುತ್ತವೆ. ಪಾಕಿಸ್ತಾನದಲ್ಲಿ ನಮ್ಮ ಸಶಸ್ತ್ರ ಪಡೆಗಳು ಮಾಡಿದ ಹಾನಿ ದೊಡ್ಡದಾಗಿತ್ತು. ಭಾರತವು ಇನ್ನು ಮುಂದೆ ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ ಎಂದು ನಿರ್ಧರಿಸಿದೆ, ನಾವು ಯಾವುದೇ ಬೆದರಿಕೆಗೆ ಹೆದರುವುದಿಲ್ಲ, ಬಲಿಯಾಗುವುದಿಲ್ಲ ಎಂದರು.
ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಭಾರತ ಈಗಾಗಲೇ ನಿರ್ಧಾರ ಮಾಡಿದೆ. ಸಿಂಧೂ ನದಿ ನೀರು ಒಪ್ಪಂದವು ಅನ್ಯಾಯವಾಗಿದೆ ಎಂದು ನಮ್ಮ ದೇಶದ ಜನರು ಅರಿತುಕೊಂಡಿದ್ದಾರೆ. ಸಿಂಧೂ ನದಿ ಒಪ್ಪಂದದಿಂದ ನೀರು ಶತ್ರುಗಳ ಭೂಮಿಗೆ ನೀರಾವರಿಗೆ ಸಹಾಯಕವಾಗಿದೆ. ಆದರೆ, ನಮ್ಮದೇ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಭಾರತದಲ್ಲಿ ಹುಟ್ಟುವ ನದಿ ನೀರಿನ ಹಕ್ಕು ಭಾರತೀರಿಗೆ ಇದೆ. ದೇಶದ ರೈತರಿಗೆ ಇದೆ. ಕಳೆದ ಏಳು ದಶಕಗಳಿಂದ ಒಪ್ಪಂದದ ಮೇರೆಗೆ ಬೇರೆ ದೇಶಗಳಿಗೆ ಭಾರತ ನೀರುಣಿಸುತ್ತಿತ್ತು. ನಮ್ಮ ಭೂಮಿ ಬರಿದಾಗುತ್ತಿತ್ತು. ಅಂದ ಮೇಲೆ ಅಂತಹ ಒಪ್ಪಂದ ಏಕೆ ಬೇಕು ಎಂದು ಪ್ರಶ್ನೆ ಮಾಡಿದರು.
ಭಾರತದ ಹಾಗೂ ನಮ್ಮ ರೈತರ ಹಿತದೃಷ್ಠಿಯಿಂದ ಪಾಕ್ ಜತೆಗಿನ ಸಿಂಧು ನದಿ ಒಪ್ಪಂದಕ್ಕೆ ಮುಂದೆಂದೂ ಒಪ್ಪಿಗೆ ನೀಡುವುದಿಲ್ಲ. ಭಯೋತ್ಪಾದಕತೆ ಪೋಷಿಸುವವರನ್ನು ನಾವು ಇನ್ನು ಮುಂದೆ ಬೇರೆ ಬೇರೆ ಎಂದು ಪರಿಗಣಿಸದೇ ಅವರೆಲ್ಲರನ್ನು ಒಂದೇ ಎಂದು ಕರೆಯುತ್ತೇವೆ. ಉಗ್ರರಿಗೆ ಸಹಾಯ ಮಾಡುವವರೆಲ್ಲರನ್ನು ಭಯೋತ್ಪಾದಕರಂತೆ ಕಾಣುತ್ತೇವೆ ಎಂದು ಪಾಕಿಸ್ತಾನ ಹಾಗೂ ಉಗ್ರ ಬೆಂಬಲಿತ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದರು.