'ಪದ್ಮಭೂಷಣ ಪ್ರಶಸ್ತಿ' ಸ್ವೀಕರಿಸಿದ ಕನ್ನಡದ ಹೆಮ್ಮೆಯ ನಟ ಅನಂತ್ ನಾಗ್; ಸಂಭ್ರಮಿಸಿದ ಕನ್ನಡಿಗರು!

ಕನ್ನಡದ ಹೆಮ್ಮೆಯ ನಟ ಅನಂತ್ ನಾಗ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇದೀಗ ಅನಂತ್ ನಾಗ್ ಅವರು ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿರುವುದು ಕನ್ನಡಿಗರಿಗೆ ಅಪಾರ ಸಂತಸವನ್ನು ತಂದಿದೆ.



HIGHLIGHTS :

  • 1.ಕನ್ನಡದ ಹೆಮ್ಮೆಯ ನಟ ಅನಂತ್ ನಾಗ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿದರು
  • 2.ಅನಂತ್ ನಾಗ್ ಅವರು 52 ವರ್ಷಗಳ ಸಿನಿಪಯಣದಲ್ಲಿ ನಾಲ್ಕು ಬಾರಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ
  • 3.ಅನಂತ್ ನಾಗ್ ಅವರು ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿರುವುದು ಕನ್ನಡಿಗರಿಗೆ ಅಪಾರ ಸಂತಸವನ್ನು ತಂದಿದೆ.

  • ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟ, ಕನ್ನಡದ ಹೆಮ್ಮೆ ಅನಂತ್ ನಾಗ್ ಅವರಿಗೆ ಮಂಗಳವಾರ (ಮೇ 27) ರಾಷ್ಟ್ರಪತಿ ಭವನದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿದರು. ಈ ಗಳಿಗೆಯು ಕೋಟ್ಯಂತರ ಕನ್ನಡಿಗರ ಸಂತಸಕ್ಕೆ ಕಾರಣವಾಗಿದೆ.
  • 52 ವರ್ಷಗಳ ಸುದೀರ್ಘ ಸಿನಿಪಯಣ

    ಅನಂತ್ ನಾಗ್ ಅವರು 1973ರಿಂದ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ನಟ ಅನಂತ್ ನಾಗ್ ಅವರು ಬಣ್ಣದ ಬದುಕಿನಲ್ಲಿ 52 ವರ್ಷಗಳ ಸುದೀರ್ಘ ಪಯಣವನ್ನು ಸವೆಸಿದ್ದಾರೆ. ಎಂಥದ್ದೇ ಪಾತ್ರವಿದ್ದರೂ ನಿರಾಯಾಸವಾಗಿ ಅದನ್ನು ತೆರೆಮೇಲೆ ಅಭಿವ್ಯಕ್ತಿಸುವ ಕಲೆ ಅನಂತ್ ನಾಗ್ ಅವರಿಗೆ ಸಿದ್ಧಿಸಿದೆ. ತಮ್ಮ ನಟನೆ ಮೂಲಕ ಕೋಟ್ಯಂತರ ಜನರ ಮನಗೆದ್ದಿರುವ ಅನಂತ್ ನಾಗ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ಸಿಕ್ಕಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
  • ಅನಂತ್ ನಾಗ್ ಏನ್ ಹೇಳಿದ್ದರು?

    ಕಳೆದ ಜನವರಿಯ 25ರಂದು ಅನಂತ್ ನಾಗ್ ಅವರಿಗೆ ಪದ್ಮಭೂಷಣ ಘೋಷಣೆ ಆಗಿರುವ ವಿಚಾರ ಗೊತ್ತಾಗಿತ್ತು. ಇದೀಗ ಮೇ 27ರಂದು ಅದನ್ನು ಅವರು ಸ್ವೀಕರಿಸಿದ್ದಾರೆ. "ಭಾರತ ಸರ್ಕಾರ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ, ಉತ್ತೇಜನ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಲಾ ಕ್ಷೇತ್ರ ಸಂಗೀತ, ರಂಗಭೂಮಿ, ಸಾಹಿತ್ಯ, ಸಾಮಾಜಿಕ ಕಾರ್ಯ ಹೀಗೆ ಎಲ್ಲ ರಂಗದಲ್ಲೂ ತೊಡಗಿರುವಂತಹ ಅಸಾಮಾನ್ಯರನ್ನು ಗುರುತಿಸಿ ಪದ್ಮಭೂಷಣದಂತಹ ಅತ್ಯುನ್ನತ ಗೌರವ ಪುರಸ್ಕಾರವನ್ನು ನೀಡುತ್ತಿದ್ದಾರೆ" ಎಂದು ನಟ ಅನಂತ ನಾಗ್ ಹೇಳಿಕೊಂಡಿದ್ದರು.
  • ಅನಂತ್‌ಗೆ ಸಿಕ್ಕಿರುವ ಪ್ರಶಸ್ತಿಗಳು

    ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ನಟ ಪ್ರಶಸ್ತಿಯು ಅನಂತ್ ನಾಗ್ ಅವರಿಗೆ ನಾಲ್ಕು ಬಾರಿ ಲಭಿಸಿದೆ. ಅದೇ ರೀತಿ ಒಂದು ಜೀವಮಾನ ಸಾಧನೆ ರಾಜ್ಯ ಪ್ರಶಸ್ತಿಯೂ ಅನಂತ್‌ಗೆ ಸಿಕ್ಕಿದೆ. ವಿಶೇಷವೆಂದರೆ, ನಟನೆಗಾಗಿ ಆರು ಬಾರಿ ಪ್ರತಿಷ್ಠಿತ ಫಿಲ್ಮ್‌ಫೇರ್ ಪ್ರಶಸ್ತಿಯೂ ಅನಂತ್‌ ನಾಗ್ ಅವರಿಗೆ ಲಭಿಸಿದೆ.ಇದೀಗ ಪದ್ಮಭೂಷಣ ಪ್ರಶಸ್ತಿಯೂ ಅವರಿಗೆ ದಕ್ಕಿದೆ.
  • ಭಾರತೀಯ ಚಿತ್ರರಂಗದಲ್ಲಿ ಅಪಾರ ಸೇವೆ ಸಲ್ಲಿಸಿರುವ ಕನ್ನಡದ ನಟ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂಬದು ಕನ್ನಡಿಗರು ಅಭಿಯಾನ ನಡೆಸಿದ್ದರು. ಇದೀಗ ಅನಂತ್ ನಾಗ್ ಅವರು ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿರುವುದು ಕನ್ನಡಿಗರಿಗೆ ಅಪಾರ ಸಂತಸವನ್ನು ತಂದಿದೆ.
  • ರಿಕಿ ಕೇಜ್‌ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

    ಗ್ರ್ಯಾಮಿ ಪ್ರಶಸ್ತಿ ವಿಜೇತರಾದ ಕನ್ನಡದ ಹೆಮ್ಮೆಯ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿತ್ತು. ಇದೀಗ ರಾಷ್ಟ್ರಪತಿ ಭವನದಲ್ಲಿ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2025ರ ಸಾಲಿನ ಪದ್ಮ ಪ್ರಶಸ್ತಿಗಳ ಘೋಷಣೆಯಲ್ಲಿ ಕರ್ನಾಟಕದ ಸಾಧಕರಲ್ಲಿ ರಿಕಿ ಕೇಜ್ ಅವರು ಕೂಡ ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಇದು ಭಾರತದ ನಾಲ್ಕನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿಯಾಗಿದೆ.

    ಅಂದಹಾಗೆ, ರಿಕಿ ಕೇಜ್ ಅವರು ಪರಿಸರ ಜಾಗೃತಿ ಮತ್ತು ಸಾಮಾಜಿಕ ಸಂದೇಶಗಳನ್ನು ಸಾರುವ ತಮ್ಮ ಸಂಗೀತಕ್ಕಾಗಿ ಜಾಗತಿಕವಾಗಿ ಹೆಸರುವಾಸಿಯಾಗಿದ್ದಾರೆ. ಈಗಾಗಲೇ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ರಿಕಿ ಕೇಜ್.



Previous Post Next Post